Manjaguni
ಮಂಜಗುಣಿ ಸೊಬಗು
ಮಂಜಗುಣಿ(Manjaguni) ಭಾರತ ದೇಶದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂದರ ಊರು. ಅಂಕೋಲಾ(Ankola) ತಾಲೂಕಿನಿಂದ ೧೦ ಕಿ.ಮೀ. ದೂರವಿರುವ ಅಂಕುಡೊಂಕಿನ ರಸ್ತೆಗಳಿಂದ ಕೂಡಿದ ಸುತ್ತಲೂ ತೆಂಗು ಮಾವು ಕಂಗುಗಳಿಂದ ಶ್ರಂಗಾರಮಯವಾಗಿರುವ ಸೂರ್ಯೋದಯದ ಹೊಂಗಿರಣದ ಕಡೆಗೆ ಮುಖವರಡಿ ನಿಂತಿರುವ ಸುಂದರ ತಾಣವೇ ""ಮಂಜಗುಣಿ"". ಒಂದೆಡೆ ಶಾಲ್ಮಲೆ ಇನ್ನೊಂದೆಡೆ ನದಿ ಕಡಲು, ಸೂರ್ಯಸ್ತವಾಗುವಾಗ ಮೂಡಿ ಬರುವ ಆ ಸುಂದರ ನೋಟ, ಅಲ್ಲಿ ಇಲ್ಲಿ ಓಡಾಡುವ ದೋಣಿಗಳು, ಕೈಬೀಸಿ ಕರೆಯುವ ಸಮುದ್ರದ ಅಲೆಗಳು ಪ್ರವಾಸಿಗರ ಮನಸೂರೆಗೊಳ್ಳುವಂತೆ ಮಾಡುತ್ತದೆ .ಪೂರ್ವಕ್ಕೆ ಹಾಗೂ ಉತ್ತರಕ್ಕೆ ಸದಾ ಹಸಿರಿನಿಂದ ಕೂಡಿದ ಕಿರು ಬೆಟ್ಟಗಳ ಸಾಲು, ಪಡುವಣದಿ ಭೋರ್ಗರೆಯುವ ಕಡಲತೀರ, ಕಡಲ ತೀರದ ಉಸುಕಿನ ರಾಶಿಗೆ ಮುತ್ತಿಕ್ಕುವ ತೆರಗಳ ಸಾಲು, ತೆರಗಳ ಮೇಲೆ ಏಳುತ್ತಾ ಬೀಳುತ್ತಾ ಸಾಗುವ ದೋಣಿಗಳ ದಿಗಂತದುದ್ದಕ್ಕೂ ಕಾಣುವ ಜಲರಾಶಿಯ ಮೇಲಿಂದ ಬೀಸುವ ತಂಗಾಳಿಗೆ ಮೈಒಡ್ಡಿ ಸಂಜೆಯ ಸೂರ್ಯಾಸ್ತದ ಸುಂದರ ಸೊಬಗು ಸವಿಯಲು ಕಡಲ ಕಿನಾರೆಯ ಉಸುಕಿನ ರಾಶಿ ಮೇಲೆ ಎಲ್ಲೆಂದರಲ್ಲಿ ಕೂಡ್ರುವ ಜನ ಸಮೂಹ ಇವೆಲ್ಲವೂ "ಮಂಜಗುಣಿ"ಯ ಸೌಂದರ್ಯಕ್ಕೆ ಮೆರಗು ನೀಡಿವೆ. ಸಹ್ಯಾದ್ರಿ ಅರಣ್ಯಗಳ ಸರಣಿ "ಮಂಜಗುಣಿ"ಯ ಸೌಂದರ್ಯವನ್ನು ಹೆಚ್ಚಿಸಿವೆ.
ಇತಿಹಾಸ(History)
ಸ್ವರ್ಗಕ್ಕೆ ಸಮನಾದ ಸ್ಥಳ ಎಂದು ಮಂಜಗುಣಿಯಲ್ಲಿರುವ ವಿಜಯನಗರದ ದತ್ತಿ ಶಾಸನದಲ್ಲಿ ದಾಖಲಾಗಿದೆ. ಮಂಜಗುಣಿಯ ಗಣಪತಿ ದೇವಸ್ಥಾನದ ಪಕ್ಕದ ಎತ್ತರದ ಸ್ಥಳದಲ್ಲಿ ಈ ಶಿಲಾ ಶಾಸನವಿದೆ. ಈ ಶಾಸನವು ವಿಜಯನಗರದ ಸಾಳ್ವ ವಂಶದ ಕ್ರಷ್ಣದೇವರಸ ಒಡೆಯನ ಕುರಿತಾಗಿ ಮತ್ತು ಮುಂದಿನ ಕಾರ್ಯಗಳ ಕುರಿತಾಗಿ ಇದೆ. ಶಿಥಿಲಗೊಂಡಿರುವ ಈ ದಾಖಲೆಯು ಸಾಳ್ವವಂಶದ ಮಹಾಮಂಡಲೇಶ್ವರನಾಗಿದ್ದ ಕ್ರಷ್ಣದೇವರಸ ಒಡೆಯನ ಆಳ್ವಿಕೆಯ ಕುರಿತು ಹೇಳುತ್ತದೆ. ನಗಿರೆರಾಜ್ಯ, ಹೈವ, ತುಳು, ಕೊಂಕಣ ಮುಂತಾದ ಪ್ರದೇಶಗಳ ದೇವಾಲಯಗಳಿಗೆ ಈತನು ಕೊಟ್ಟ ದಾನ ದತ್ತಿಗಳ ವಿವರಗಳನ್ನು ಈ ಶಾಸನ ಹೊಂದಿದೆ. ಹೆಚ್ಚಿನ ವಿವರಗಳು ನಷ್ಟವಾಗಿವೆ. ಶಕವರ್ಷ 1473 ಎಂದು ಉಲ್ಲೇಖವಿರುವ ಈ ಶಾಸನದಲ್ಲಿ ಚೈತ್ರ ಬಹುಳ 30 ರಂದು ಸೋಮವಾರ ಸೂರ್ಯಗ್ರಹಣದಂದು ಫಾಲ್ಗುಣ ಮಾಸದಲ್ಲಿ ಈ ಶಾಸನ ನಿಲ್ಲಿಸಿದ ಕುರಿತು ವಿವರವಿದೆ. ಅಂದರೆ ಕ್ರಿ.ಶ. 1350 ಮಾರ್ಚ 17 ಎಂದು ಅರ್ಥವಾಗುತ್ತದೆ. ಈ ಶಾಸನದಲ್ಲಿ ಸುಮಾರು 40 ಸಾಲಿನ ವಿವರಗಳನ್ನ ನೀಡಲಾಗಿದೆ ಇದರಲ್ಲಿ ಕೆಲವು ಅಳಿಸಿಹೋಗಿವೆ. ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆದರೆ ಸಮಗ್ರ ಮಾಹಿತಿ ಸಿಗುವಂತಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆ ಗಮನಹರಿಸಬೇಕಾದ ಅಗತ್ಯವಿದೆ.
ದೇವಾಲಯಗಳು(Temples)
- "ಶ್ರಿ ವಿನಾಯಕ ತಾರಿ ಜಟ್ಗ"
ಮಂಜಗುಣಿಯ ಆಕರ್ಷಣೀಯ ಕೇಂದ್ರಬಿಂದುವಿನಲ್ಲಿ ಶ್ರಿ ವಿನಾಯಕ ತಾರಿ ಜಟ್ಗ ದೇವರು ಕೂಡ ಒಂದು. ಗಣಪತಿ ಮತ್ತು ಜಟ್ಗ(ಶಿವ) ಎದುರು ಬದುರು ಪ್ರತಿಷ್ಟಾಪನೆಗೊಂಡಿದೆ. ಗಣಪತಿ ದೇವರ ಅಷ್ಟಬಂಧ ಮಹೋತ್ಸವವನ್ನು ಪ್ರತಿವರ್ಷವು ಆಚರಿಸಲಾಗುತ್ತದೆ. ಹಾಗೇ ಜಟ್ಗ ದೇವರ ಆವಾರಿ(avari) ಉತ್ಸವವನ್ನು ಮಳೆಗಾಲದ ಪ್ರಾರಂಭದಲ್ಲಿ ಮಾಡಲಾಗುತ್ತದೆ. ಈ ಎರಡು ಕಾರ್ಯಗಳಿಗೆ ವಿವಿಧ ಗ್ರಾಮಗಳಿಂದ ಹಾಗೂ ವಿವಿಧ ತಾಲೂಕುಗಳಿಂದ ಆಸ್ತಿಕ ಭಕ್ತರು ಬಂದು ದೇವರ ಕ್ರಪೆಗೆ ಪಾತ್ರರಾಗುತ್ತಾರೆ. ಈ ದೇವರುಗಳು ಶಕ್ತಿಯುತವಾಗಿದ್ದು, ಆವಾರಿಯಂದು ಕುರಿ, ಕೋಳಿಗಳನ್ನು ಹರಕೆಯ ರೂಪದಲ್ಲಿ ಬಲಿಕೊಡಲಾಗುತ್ತದೆ. ಈ ದೇವರುಗಳ ಉಪದೇವರುಗಳಾದ "ಗೊಲ್ಲಿಕೇರೆ" ಮತ್ತು "ನಾಗರ"ಕ್ಕೂ ಪೂಜೆಯನ್ನು ಸಲ್ಲಿಸಲಾಗುತ್ತದೆ. ಆವಾರಿಯ ದಿನ ಗೊಲ್ಲಿಕೇರಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಮೊದಲು ಇಲ್ಲಿಯೇ ಕುರಿ, ಕೋಳಿಗಳನ್ನು ಬಲಿಕೊಡಲಾಗುತ್ತದೆ. ನಂತರ ಜಟ್ಗ ದೇವರಿಗೆ ನೀಡುತ್ತಾರೆ.
- "ಮಹಾಸತಿ"
ಮಂಜಗುಣಿಯಲ್ಲಿ "ಮಹಾಸತಿ" ಎಂದು ಕರೆಯಲ್ಪಡುವ ಎರಡು ದೇವರುಗಳಿವೆ. ಒಂದು ತಾರಿಯ ಘಟ್ಟದ ಮೇಲಿನ ಬೇಣದಲ್ಲಿ, ಮತ್ತೊಂದು ಬೊಮ್ಮಗೌಡರ ಮನೆಯ ಸಮೀಪ. ಇದು ಈಗ ವಾಡಿಕೆಯ ಶಬ್ದದಲ್ಲಿ ಮಾಸ್ತಿ ಎಂತಲೂ ಕರೆಯುತ್ತಾರೆ. ಇದರ ಹಿಂದೆ ಒಂದು ನೋವಿನ ಕಥೆಯಿದೆ. ಮಹಾಸತಿ ಎನ್ನುವುದು ಗಂಡನ ಮರಣಾಂತರ ಅವರ ಜೊತೆಗೆ ಚಿತೆಗೆ ಹಾರಿದವರು. ಇದನ್ನು "ಸತಿ ಪದ್ಧತಿ" ಎಂದು ಕರೆಯುವರು. ಕ್ರಿ.ಶ. 1829ರಲ್ಲಿ ಸತಿ ಪದ್ಧತಿಯನ್ನು ಕಾನೂನುಬದ್ಧವಾಗಿ ತಡೆಯಲಾಯಿತು. ಹೀಗಾಗಿ ಮಂಜಗುಣಿಯಲ್ಲಿ ಸತಿ ಹೋದವರು 1829ರ ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಮಂಜಗುಣಿಯಲ್ಲಿ ಇರುವ ಎರಡು ಮಹಾಸತಿ ಗುಡಿಯಲ್ಲಿ ವಿಶೇಷ ಹಬ್ಬ ಹರಿದಿನಗಳ ಸಮಯದಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತದೆ. ಈ ಸ್ಥಳಕ್ಕೆ ಭಕ್ತಾದಿಗಳು ಬೇರೇ ಬೇರೇ ಕಡೆಗಳಿಂದ ಬಂದು ಪೂಜೆ ಸಲ್ಲಿಸುತ್ತಾರೆ.
- "ಸನ್ಯಾಸಿ ಗುಡಿ"
ಮಂಜಗುಣಿಯ ಮಾಸ್ತಿಬೇಣದಲ್ಲಿ "ಸನ್ಯಾಸಿ" ದೇವರ ಗುಡಿಯಿದೆ. ಇಲ್ಲಿ ವಿಶೇಷ ಸಂದರ್ಭದಲ್ಲಿ ಪೂಜೆಯನ್ನು ಮಾಡಲಾಗುತ್ತದೆ. ಆದರೆ ಈ ಸನ್ಯಾಸಿ ದೇವರಿಗೆ ವಿಶೇಷವೆಂದರೆ ಸಿಗರೇಟನ್ನು ಇಡಲಾಗುತ್ತದೆ. ಈ ದೇವರಿಗೆ ಮಾದಕ ವಸ್ತುಗಳನ್ನು ನೀಡಿದರೆ ಬೇಡಿಕೆಗಳು ಈಡೇರುತ್ತದೆ ಎಂಬ ನಂಬಿಕೆಯಿದೆ. ಈ ಮಾದಕ ವಸ್ತುವನ್ನು ನೀಡುವುದರ ಹಿಂದೆ ಒಂದು ಸತ್ಯವು ಅಡಗಿದೆ. ಈ ಸನ್ಯಾಸಿಯು ಅಪ್ಪಟ ಶಿವನ ಭಕ್ತ ಬಹುತೇಕ ಸನ್ಯಾಸಿಗಳು ಶಿವನ ಭಕ್ತರಾಗಿರುವುದನ್ನು ಇತಿಹಾಸದಲ್ಲಿ ಕಾಣುವಂತಾಗಿದೆ. ಶಿವನು ಬಂಗಿ ಪ್ರಿಯ ಮಂಜಗುಣಿಯಲ್ಲಿ ಪ್ರತಿಷ್ಟಾಪಿಸಲಾದ ಸನ್ಯಾಸಿಯು ಕೂಡ ಬಂಗಿಪ್ರಿಯನಾಗಿದ್ದ. ಆ ಮೂಲಕವಾಗಿ ಅವನು ಶಿವನಿಗೆ ಹತ್ತಿರನಾಗಬೇಕೆಂದು ಬಯಸಿದವ. ಮನೆ ಮಠಗಳನ್ನು ಬಿಟ್ಟು ದೇವರನ್ನು ಅರಸುತ್ತ ನಡೆದವರು. ಶಿವರಾತ್ರಿಯಂದು ಗೋಕರ್ಣ(Gokarna)ಕ್ಕೆ ಸಂತರ ಹಿಂಡೆ ಹರಿದುಬರುತ್ತಿತ್ತು. ಆದರೆ ಆ ಸಂದರ್ಭದಲ್ಲಿ ಯಾವುದೇ ಸೌಕರ್ಯಗಳು ಇಲ್ಲದಿದ್ದರಿಂದ ನಡೆದುಕೊಂಡೇ ಸಂಚರಿಸಬೇಕಾಗಿದ್ದು, ಇದಕ್ಕಾಗಿಯೇ ಆಯಾ ಗ್ರಾಮದಲ್ಲಿ ವಿಶ್ರಾಂತಿಗ್ರಹಗಳನ್ನು ನಿರ್ಮಿಸಿದ್ದರು. ಶಿವರಾತ್ರಿಗೆಂದು ಗೋಕರ್ಣಕ್ಕೆ ಆಗಮಿಸಿದ ಬಂಗಿಪ್ರಿಯ ಸನ್ಯಾಸಿಯೊಬ್ಬ ಮಂಜಗುಣಿಯಲ್ಲೇ ಸಾವನ್ನಪ್ಪುತ್ತಾನೆ. ಹೀಗಾಗಿ ಸ್ಥಳೀಯರು ಆತನನ್ನು ಇಲ್ಲಿಯೇ ಸಮಾಧಿ ಮಾಡುತ್ತಾರೆ. ಸಮಾಧಿಯ ಸ್ಥಳದಲ್ಲಿಯೇ ಗೌರವವನ್ನು ಸೂಚಿಸಲಾಗುತ್ತದೆ. ಈಗ ಅಲ್ಲಿ ಸನ್ಯಾಸಿಯ ಗುಡಿಯನ್ನು ನಿರ್ಮಿಸಲಾಗಿದೆ. ಹಾಗೇ ವಿಶೇಷ ದಿನದಂದು ಪೂಜೆಯನ್ನು ಮಾಡಲಾಗುತ್ತದೆ.
- "ಮಹಾದೇವಿ"
ಶಕ್ತಿ ದೇವತೆಯೆಂದೇ ಖ್ಯಾತಿಯನ್ನು ಹೊಂದಿರುವ ಶ್ರೀ ಮಹಾದೇವಿ ತನ್ನದೇ ಆದ ಭಕ್ತರನ್ನು ಹೊಂದಿದೆ. ಉತ್ತರ ಕನ್ನಡದ ವಿವಿಧ ತಾಲೂಕುಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಶ್ರೀ ದೇವಿಯ ದರ್ಶನಕ್ಕೆ ಪಾತ್ರರಾಗುತ್ತಾರೆ. ಹಾಗೇ ಇಲ್ಲಿ ಶ್ರಿ ಮಹಾದೇವಿ ಜಾತ್ರೆಯು ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕ್ರಿ.ಶ. 1981ರಲ್ಲಿ ಮಂಜಗುಣಿಯಲ್ಲಿ ಪ್ರಪ್ರಥಮವಾಗಿ ಶ್ರೀ ಮಹಾದೇವಿಯ ಜಾತ್ರೆಯನ್ನು ಪ್ರಾರಂಭಿಸಿದರು. ಜಾತ್ರೆಯಂದು ದೇವಿಯ ಪಲ್ಲಕ್ಕಿ ಉತ್ಸವವು ಕೂಡ ಊರಿನಲ್ಲಿ ಸಂಚರಿಸುವ ಮಾರಿಕಟ್ಟೆಗೆ ಬಂದು ಅಲ್ಲಿ ಸುತ್ತು ಹಾಕಿ ಮತ್ತೆ ತನ್ನ ಮೂಲ ಸ್ಥಾನಕ್ಕೆ ಮರಳುವಂತೆ ಮಾಡಿದರು. ಈ ಮೂಲಕವಾಗಿ ದೇವಿಯೇ ಭಕ್ತರೆಡೆಗೆ ಬರುವಂತೆ ಮಾಡಿದ್ದು ವಿಶೇಷ಼ ಪಕ್ಕದಲ್ಲಿಯೇ 17 ದೇವರ ಶಿಲೆಗಳು ಮೂಡಿಬಂದಿತ್ತು. ಹೀಗಾಗಿ ದಾನಿಗಳ ನೆರವಿನಿಂದ ಗ್ರಾಮದ ಪ್ರಮುಖರು ಸೇರಿ ಪಕ್ಕದಲ್ಲಿದ್ದ ಅತ್ತಿಯ ಮರವನ್ನು ತೆಗೆದು 1983ರಲ್ಲಿ ನೂತನವಾಗಿ ದೊಡ್ಡದಾದ ಕಟ್ಟಿಗೆಯ ದೇವಿಯ ಮೂರ್ತಿಯನ್ನು ಕುಮಟಾದಿಂದ ನಿರ್ಮಿಸಿ ತರಲಾಯಿತು. ನಂತರ ದೇವಿಯ ಮೂರ್ತಿಯನ್ನು ಜೈನರಿಂದ ಪ್ರತಿಷ್ಟಾಪಿಸಲಾಯಿತು. ಹಿಂದೆ ದೇವಿ ಇದ್ದಲ್ಲಿಗೆ ಸನ್ಯಾಸಿಯೊಬ್ಬರು ಬಂದು ಬಾವಿಯ ಸಮೀಪ ಹೋಗಿ ಮಾಯವಾದರು ಎಂಬ ಇತಿಹಾಸವಿದೆ. ಹಾಗೇ ಹಾವುಗಳು ಕೂಡ ಕಾಣಿಸಿಕೊಳ್ಳುತ್ತಿದ್ದರಿಂದ ಅದನ್ನು ದೇವರ ಹಾವೆಂದು ನಂಬಲಾಗಿತ್ತು. ಹೀಗಾಗಿ ದೇವಿಯ ಪ್ರತಿಷ್ಟಾಪನೆಯ ಸಂದರ್ಭದಲ್ಲಿಯೇ ಸನ್ಯಾಸಿ ಮತ್ತು ನಾಗದೇವತೆಯನ್ನು ಪ್ರತಿಷ್ಟಾಪಿಸಲಾಗಿದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಮತ್ತು ಪ್ರತಿದಿನ ಪುಡಿ ಪ್ರಸಾದ ನಡೆಯುತ್ತದೆ. ಪ್ರತಿ ವರ್ಷ ಫೆಬ್ರುವರಿಯಲ್ಲಿ ಅಷ್ಟಬಂದ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇದರ ನಿಮಿತ್ತವಾಗಿ ಅನ್ನಸಂತರ್ಪಣೆಯನ್ನು ಮಾಡಲಾಗುತ್ತದೆ.
- "ಮಾರಿಕಟ್ಟೆ"
ಪ್ರತಿ ವರ್ಷವು ನಮ್ಮೂರಿಗೆ ಆಗಮಿಸಿ 15 ದಿನಗಳವರೆಗೆ ಇದ್ದು ನಂತರ ಮುಂದಿನ ಊರಿಗೆ ತೆರಳುತ್ತದೆ ಅದನ್ನು "ಮಾರಿಯಮ್ಮನ ಒಜ್ಜೆ" ಎಂದು ಕರೆಯುತ್ತಾರೆ. ಇಲ್ಲಿ ಮುಟ್ಟಿ ಕಸಬರಿಗೆ ಗೆರ್ಸಿ ಬಳೆ ಮುಂತಾದ ರಾಶಿಗಳನ್ನು ಕಾಣುತ್ತೇವೆ. ರಾಶಿಯ ಮಧ್ಯದಲ್ಲಿ ಮಾರಿಯಮ್ಮನ ಮೂರ್ತಿಯು ಕೂಡ ಇರುತ್ತದೆ. ಉತ್ತರಕನ್ನಡದ ದಕ್ಷಿಣ ಗಡಿಯಲ್ಲಿರುವ ಗೊರಟೆ ಎಂಬಲ್ಲಿ ಪ್ರಾರಂಭವಾಗಿ ಊರಿಂದೂರಿಗೆ ಪಯಣಿಸುತ್ತಾ ಮುಂದೆ ಸಾಗಿ ಕಾಳಿ ನದಿಯಲ್ಲಿ ವಿಸರ್ಜನೆಯಾಗುತ್ತದೆ. ಹೀಗಾಗಿ ಗಂಗಾವಳಿಯಿಂದ ಬಂದ "ಮಾರಿಯಮ್ಮನ ಒಜ್ಜೆ" ಈ ಕಟ್ಟೆಯ ಮೇಲೆ ಇಡುತ್ತಾರೆ. ಹೀಗಾಗಿ ಇದಕ್ಕೆ ಮಾರಿಕಟ್ಟೆ ಎಂದು ಕರೆಯಲು ಕಾರಣವಾಗಿದೆ. ಈ ಸ್ಥಳವು ಅತ್ಯಂತ ಶಕ್ತಿದಾಯಕವೂ ಆಗಿದೆ.
ಪ್ರೇಕ್ಷಣಿಯ ಸ್ಥಳಗಳು
ಮಂಜಗುಣಿ ಚಿಕ್ಕದಾಗಿದ್ದರು ಕೂಡ ಇಲ್ಲಿಯ ಪರಿಸರ, ಬೆಟ್ಟ, ಗುಡ್ಡ, ಕಡಲತೀರ, ಕಂಗೊಳಿಸುವ ಅಡಿಕೆ-ತೆಂಗು ಹೀಗೆ ವಿವಿಧ ಬಗೆಗಳು ಒಳಗೊಂಡಿದೆ. ಸೂರ್ಯನ ಚೆಲುವು ಕಾನನದ ನೆತ್ತಿಯ ಮೇಲಿಂದ ಸೂರ್ಯೋದಯವನ್ನು ಕಾಣಬಹುದಾಗಿದೆ. ಸೂರ್ಯನ ಹೊಂಬಣ್ಣದ ಕಿರಣಗಳು ಗಂಗಾವಳಿ ನದಿಯಲ್ಲಿ ಬೀಳುತ್ತಿದ್ದಂತೆ ಸುತ್ತಮುತ್ತಲುಗಳಲ್ಲಿ ಚೆಲುವು ತುಂಬಿಕೊಳ್ಳುತ್ತದೆ. ಹಾಗೇ ಸೂರ್ಯಾಸ್ತವು ಕೂಡ ಮನಮೋಹಕವಾಗಿರುತ್ತದೆ. ಸಂಜೆಯಾಗುತ್ತಿದ್ದಂತೆ ಸೂರ್ಯಾಸ್ತದ ಚೆಲುವು, ದೋಣಿಗಳ ತೂಗುಯ್ಯಾಲೆ, ತಣ್ಣನೆಯ ಗಾಳಿ ಮನ್ನಸ್ಸಿಗೆ ಮುದನೀಡುತ್ತದೆ.
- "ಕಡಲತೀರ"
ಮಂಜಗುಣಿಯ ಕಡಲತೀರವು ಬಹು ವಿಸ್ತಾರವಾಗಿದ್ದು, ಇಲ್ಲಿ ಸಂಚರಿಸಲು ಯೋಗ್ಯವಾಗಿದ್ದು, ಹಾಗೇ ಇಲ್ಲಿ "ಭೀಮನಕಲ್ಲು" ಇದೆ. ಭೀಮನ ಆಕಾರದಲ್ಲಿ ಕಲ್ಲು ಇರುವುದರಿಂದ ಭೀಮನ ಕಲ್ಲು ಎಂದು ಕರೆಯುತ್ತಾರೆ. ಹಾಗೇ ಇನ್ನೊಂದು ಗುಡ್ಡದಲ್ಲಿ ಹಕ್ಕಿ ಆಕಾರದ ಕಲ್ಲು ಇದೆ. ಇದಕ್ಕೆ ನವಿಲಿನ ಕಲ್ಲು ಎಂದು ಕರೆಯುತ್ತಾರೆ. ಇವೆರಡನ್ನು ಹಿಂದೆ ಪಾಂಡವರು ವನವಾಸಕ್ಕೆ ಬಂದ ಸಮಯದಲ್ಲಿ ನಿರ್ಮಸಿದರು ಎಂಬ ಪ್ರತೀತಿಯಿದೆ.
- "ಹನಿಬೀಚ್"
ಮಂಜಗುಣಿ ಗಡಿಪ್ರದೇಶವಾದ ಹೊನ್ನೆಬೈಲ್ ಕಡಲ ತೀರವನ್ನು "ಹನಿಬೀಚ್" ಎಂದು ಕರೆಯುತ್ತಾರೆ. ಇದು ಜಗತ್ಪ್ರಸಿದ್ಧವಾದ ಕಡಲತೀರವಾಗಿದೆ. ಹನಿ ಎಂದರೆ ಜೇನು, ಬೀಚ್ ಎಂದರೆ ತೀರ. ಹೀಗಾಗಿ ಇದಕ್ಕೆ ಕನ್ನಡದಲ್ಲಿ ಜೇನಿನ ತೀರವೆಂದು ಕರೆಯಲಾಗುತ್ತದೆ. ನಿಜಕ್ಕೂ ಇದು ಜೇನಿನತೀರ ಎಂದು ಕರೆಯಿಸಿಕೊಳ್ಳುವುದಕ್ಕೆ ಸೂಕ್ತವಾಗಿದೆ. ಇಲ್ಲಿಯ ಕಲ್ಲುಬಂಡೆಗಳು ಕಡಲತೀರ, ತಣ್ಣನೆಯ ಗಾಳಿ, ಸೂರ್ಯಾಸ್ತದ ಚೆಲುವು, ಹಕ್ಕಿಗಳ ಇಂಚರ, ತೆರೆಗಳ ನರ್ತನ, ಏಕಾಂತ ಹೀಗೆ ಎಲ್ಲವೂ ಇಲ್ಲಿ ಗರಿಬಿಚ್ಚುತ್ತವೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ರೆಸಾರ್ಟಗಳನ್ನು ನಿರ್ಮಿಸಲಾಗಿದೆ. ಡಿಸೆಂಬರ-ಜನವರಿ ತಿಂಗಳಿನಲ್ಲಿ ಇಲ್ಲಿ ವಿದೇಶಿ ಪ್ರವಾಸಿಗರ ಹಿಂಡು ಹರಿದುಬರುತ್ತದೆ. ಹಿಂದೆ ಇಲ್ಲಿಗೆ ಸರಿಯಾದ ರಸ್ತೆ ಇಲ್ಲದ ಸಮಯದಲ್ಲಿ ಕೆಲವು ಸಾಹಿಸಿಗರು ಮಾತ್ರ ಬರುತ್ತಿದ್ದರು. ಆದರೆ ಈಗ ರಸ್ತೆ, ರೆಸಾರ್ಟಗಳ ನಿರ್ಮಾಣವಾಗಿದ್ದರಿಂದ ಎಲ್ಲರಿಗೂ ಅನುಕೂಲವಾಗಿದೆ.
- "ಮಲ್ಕನ ಬಾವಿ"
ಅನಾದಿಕಾಲದಿಂದಲೂ ಕಲ್ಲಿನ ನಡುವಿನಿಂದ ನೀರು ಹರಿಯುತ್ತಿದ್ದು, ಇದರಿಂದ ಜನರಿಗೆ ಅನುಕೂಲವಾಗಿತ್ತು. ಬೇಸಿಗೆಯಲ್ಲಿಯೂ ಕೂಡ ಇಲ್ಲಿ ನೀರು ಹರಿಯುತ್ತಿದ್ದರಿಂದ ಅಕ್ಕ ಪಕ್ಕಗಳಲ್ಲಿ ಹಿಂಗಾರಿನ ಸಮುದ್ರದಲ್ಲಿ ಕಾರುಭತ್ತಗಳನ್ನು ಬೆಳೆಯುತ್ತಿದ್ದರು. ಹೀಗಾಗಿ ಇಲ್ಲಿಯ ಪರಿಸರವು ಕೂಡ ತಂಪಾಗಿರುತ್ತಿತ್ತು. ಆದರೆ ನೀರು ಹರಿಯುವ ಸ್ಥಳಕ್ಕೆ ಮಲ್ಕನಬಾವಿಯೆಂದೇ ಕರೆಯಲಾಗುತ್ತದೆ. ಈಗಲೂ ಕೂಡ "ಮಲ್ಕನಬಾವಿ" ಎಂಬ ಹೆಸರಿನಿಂದಲೇ ಖ್ಯಾತಿಯಾಗಿದೆ. ಈ 'ಮಲ್ಕ' ಎನ್ನುವ ಹೆಸರಿನ ಜಾಡುಹಿಡಿದು ಹೊರಟರೆ ನಾವು 17ನೇ ಶತಮಾನ ಅಂದರೆ ಸುಮಾರು 400 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಇದರ ಹಿನ್ನಲೆಯು ಕಥೆಯು ಕೂಡ ಅಷ್ಟೆ ರೋಚಕವಾಗಿದೆ. ಅಂಕೋಲಾ ತಾಲೂಕಿನ ಕುಂಟಗಣಿ ಗ್ರಾಮದ ಹೆಬ್ಬಾರ ಮನೆತನದವರಿಗೆ ಸಂತೆಯಲ್ಲಿ ಒಬ್ಬ ಅನಾಥ ಬಾಲಕ ಸಿಗುತ್ತಾನೆ. ಬಾಲಕನಿಗೆ ಯಾರೂ ಇಲ್ಲದಿರುವುದರಿಂದ ಹೆಬ್ಬಾರರು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮನೆ ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಆ ಅನಾಥ ಬಾಲಕನ ಹೆಸರೇ ಶರೀಫ್ ಉಲ್ ಮುಲ್ಲಕ್! ಶರೀಫ್ ಉಲ್ ಮುಲ್ಲಕ್ ಹೆಬ್ಬಾರರ ಮನೆಯಲ್ಲಿ ಕೆಲಸದ ಆಳಾಗಿ ದುಡಿಯುತ್ತಿದ್ದ. ಈತ ಪ್ರತಿದಿನ ದನವನ್ನು ಮೇಯಿಸಬೇಕಾಗಿತ್ತು. ಒಮ್ಮೆ ಈ ಬಾಲಕ ದನ ಮೇಯಿಸುವ ಕೆಲಸ ಮಾಡುತ್ತಿದ್ದ ಆ ಸಂದರ್ಭದಲ್ಲಿ ದಣಿವಾಗಿದ್ದರಿಂದ ಒಂದು ಕಟ್ಟೆಯ ಮೇಲೆ ಹೋಗಿ ಮಲಗಿಕೊಂಡ. ಆಗಲೇ ಆತನು ಇತಿಹಾಸ ಪುರುಷನಾಗುವ ಸೂಚನೆ ದೊರೆತದ್ದು! ಕಟ್ಟೆಯ ಮೇಲೆ ಮಲಗಿದ್ದ ಆತನ ಮುಖದ ಮೇಲೆ ಬಿಸಿಲು ಬೀಳುತ್ತಿದ್ದರಿಂದ ಒಂದು ನಾಗರಹಾವು ಅಲ್ಲಿಗೆ ಬಂದು ಹೆಡೆಬಿಚ್ಚಿ ಬಿಸಿಲನ್ನು ತಡೆಯುತ್ತಿತ್ತು. ಹೆಬ್ಬಾರರು ಈ ಅಚ್ಚರಿಯ ಕ್ಷಣವನ್ನು ನೋಡಿದಾಗ ಹಾವು ಬಿಲವನ್ನು ಸೇರಿಕೊಂಡಿತು. ಶರೀಫ್ ಉಲ್ ಮುಲ್ಲಕನಿಗೆ ರಾಜಯೋಗ ಲಭಿಸುವ ದಿನ ದೂರವಿಲ್ಲ ಎಂದು ಹೆಬ್ಬಾರರೇ ಅಂದೇ ನುಡಿದಿದ್ದರಂತೆ. ಸರ್ಪ ನೆರಳು ನೀಡಿದ್ದರಿಂದ ಹೆಬ್ಬಾರರು ಈತನಿಗೆ "ಸರ್ಪಮಲ್ಲಿಕ" ಎಂದು ಕರೆದರು. ಅದೇ ಹೆಸರಿನಿಂದ ಆತ ಖ್ಯಾತಿಯುದ. ಈತನ ಅಧಿಕಾರವಧಿಯಲ್ಲಿ ಚಂದಾವರ, ಕಾಗಲ್ ಹಾಗೂ ಅಂಕೋಲಾ ಕೋಟೆಯನ್ನು ನಿರ್ಮಿಸಿದನು. 1608 ರಿಂದ 1640ರ ಅವಧಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇಂದಿನಂತೆ ಅಂದು ಮಂಜಗುಣಿಯ ಕೂಡ ಹೆಚ್ಚಿನ ಭೂಭಾಗವನ್ನು ಹೊಂದಿರಲಿಲ್ಲ. ಇಲ್ಲಿ ಬಹುತೇಕ ನೀರಿನಿಂದ ಕೂಡಿತ್ತು. ಹೀಗಾಗಿ ಇಲ್ಲಿಗೆ ದೊಡ್ಡ ದೊಡ್ಡ ಹಡಗುಗಳು ಬಂದು ನಿಲ್ಲುತ್ತಿದ್ದವು. ಇದರಿಂದಾಗಿ ಇದು ಕೂಡ ವಾಣಿಜ್ಯ ಕೇಂದ್ರವಾಗಿತ್ತು. ಸರ್ಪಮಲ್ಲಿಕ ಕೂಡ ಇಲ್ಲಿಗೆ ಆಗಮಿಸಿ ತನ್ನ ವ್ಯವಹಾರವನ್ನು ಗಮನಿಸುತ್ತಿದ್ದ. ಇಲ್ಲಿಗೆ ಬಂದಾಗ ಪಕ್ಕದಲ್ಲಿಯೇ ಹರಿಯುತ್ತಿದ್ದ ಝರಿ ನೀರನ್ನು ಕುಡಿಯುತ್ತಿದ್ದ. ಹಾಗೇ ಈ ನೀರಿನ ಸಂಗ್ರಹಕ್ಕಾಗಿ ಸಂಗ್ರಹಾರವನ್ನು ನಿರ್ಮಿಸಿ ಜನತೆಗೆ ಒದಗಿಸಿದ್ದ. ಇದರಿಂದಾಗಿ ಇಲ್ಲಿಯ ಜನರು ಈ ಝರಿ ನೀರಿನ ಸ್ಥಳವನ್ನು "ಸರ್ಪ ಮಲ್ಲಿಕನ ಬಾವಿ" ಎಂದು ಕರೆಯುತ್ತಿದ್ದರು. ಇದು ಹಂತ ಹಂತವಾಗಿ ಈಗ "'ಮಲ್ಕನಬಾವಿ'" ಎಂದು ಕರೆಯಲಾಗುತ್ತದ
ಶಾಲೆಗಳು(Schools)
ಸುಂದರ ತಾಣವಾದ ಮಂಜಗುಣಿಯಲ್ಲಿ ಎರಡು ಪ್ರಾಥಮಿಕ ಶಾಲೆಗಳು ಹಾಗೂ ಒಂದು ಪ್ರೌಢ ಶಾಲೆಗಳಿವೆ. ಈ ಶಾಲೆಗಳು ರಾಜ್ಯಮಟ್ಟದಲ್ಲಿ ಮಾನ್ಯತೆ ಪಡೆದಿವೆ. ಈ ಮೂಲಕವಾಗಿ ಮಂಜಗುಣಿ ಗ್ರಾಮವು ಶೈಕ್ಷಣಿಕವಾಗಿ ಮುಂದುವರೆದಿದೆ. ಮಂಜಗುಣಿಯಲ್ಲಿ ಶಿಕ್ಷಣದ ಏಳಿಗೆಗೆ ಈ ಶಾಲೆಗಳ ಕೊಡುಗೆ ಅಪಾರ. ಮಂಜಗುಣಿಯಲ್ಲಿ ಅಂಗನವಾಡಿ ಕೇಂದ್ರಗಳು ಇವೆ.